ಕೊಪ್ಪಳದ ಚಂದ್ರಗಿರಿ ಬೆಟ್ಟದಲ್ಲಿ ಶಿಲಾಯುಗದ ಗವಿ ಚಿತ್ರಗಳು ಪತ್ತೆ :
ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಚಂದ್ರಗಿರಿ ಬೆಟ್ಟ ಪ್ರದೇಶದಲ್ಲಿ ಶಿಲಾಯುಗದ ಆದಿಮಾನವನ ಗವಿ ಚಿತ್ರಗಳು ಬೆಳಕಿಗೆ ಬಂದಿವೆ ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಮತ್ತವರ ತಂಡ ಈ ಚಿತ್ರಗಳುಳ್ಳ ಗವಿಯನ್ನು ಶೋಧಿಸಿದೆ. ಹಿಟ್ನಾಳ್ ಹೋಬಳಿಯ ಅಚಲಾಪುರ ಸೀಮೆಯ ಚಂದ್ರಗಿರಿ ಗ್ರಾಮದ ಹತ್ತಿರವಿರುವ ಬೆಟ್ಟದಲ್ಲಿ ಈ ಗವಿ ಕಂಡು ಬಂದಿದೆ. ಭೂತಪ್ಪನ ಹೊಲದ ಉತ್ತರ ಮೇರೆಗೆ ಇರುವ ಈ ಗವಿಗೆ ಜೇನುಕಲ್ಲು ಗವಿ ಎಂದು ಸ್ಥಳೀಯರು ಕರೆಯುತ್ತಾರೆ .ಅರೇ ವೃತ್ತಾಕಾರದಲ್ಲಿ ಕಲ್ಲಾಸರೆಯಂತಿರುವ ಈ ಗವಿ ಪೂರ್ವ ಪಶ್ಚಿಮವಾಗಿ 30ಪೀಟ್ ಉದ್ದವಾಗಿ, ಮಧ್ಯದಲ್ಲಿ 10ಪೀಟ್ ಅಗಲವಾಗಿ ಹಾಗೂ 25 ಫೀಟು ಎತ್ತರವಾಗಿದೆ.ನೆಲಮಟ್ಟದಿಂದ ಗವಿ ಬೆಟ್ಟದಲ್ಲಿ ಸುಮಾರು 100 ಮೀಟರ್ ಎತ್ತರದಲ್ಲಿದೆ. ಗವಿಯು ಆದಿಮಾನವನ ವಾಸಸ್ಥಾನವಾಗಿದ್ದು ಗವಿಯಲ್ಲಿ ಹಾಳು ಮಣ್ಣು ,ವಿಶಿಷ್ಟ ಅಲಂಕರಣೆಯ ಮಡಿಕೆ ಚೂರುಗಳು ,ಚರ್ಟ್ ಶಿಲೆಯ ತುಂಡುಗಳು ಹಾಗೂ ಅಸ್ಥಿ ಅವಶೇಷಗಳು ಕಂಡುಬಂದಿವೆ. ಜೊತೆಗೆ ಗವಿಯ ಹಿಂಬದಿಯ ವಿಶಾಲ ಗೋಡೆಯ ತುಂಬೆಲ್ಲ ಕೆಂಪುವರ್ಣದಲ್ಲಿ ಬಿಡಿಸಿರುವ ಹಲವಾರು ಚಿತ್ರಗಳಿವೆ. ಅವುಗಳಲ್ಲಿ ಕಾಲುಗಳನ್ನು ವಕ್ರ ಮಾಡಿ ಕೈಗಳನ್ನು ಮೇಲಕ್ಕೆ ಎತ್ತಿ ನಿಂತಿರುವ ಮನುಷ್ಯ ,ನಾಲ್ಕು ಸಹಜ ಮನುಷ್ಯ ಚಿತ್ರಗಳು, ಕಡ್ಡಿ ಆಕೃತಿಯ ಎಂಟು ಮನುಷ್ಯ ಚಿತ್ರಗಳು ,ಒಂದು ಪೂರ್ಣ ರೂಪದ ಕೋಣನ ಚಿತ್ರ,ಹಂದಿಯ ಮುಖ ,ಹಸ್ತ ಮುದ್ರೆ ಹಾಗೂ ಚೌಕ ಮಂಡಲಗಳ ಚಿತ್ರಗಳಿವೆ. ಮನುಷ್ಯ ಹಾಗೂ ಕೋಣದ ಮುಂಡದ ತುಂಬಾ ವಕ್ರ ರೇಖೆಗಳನ್ನು ಹಾಕಲಾಗಿದೆ. ಹಾಗಾಗಿ ಬೇಟೆಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಆಚರಣೆಯ ಭಾಗವಾಗಿ ಚಿತ್ರಗಳನ್ನು ರಚಿಸಿರುವುದು ತಿಳಿಯುತ್ತದೆ.ಈ ಚಿತ್ರಗಳು ಹಿರೇಬೆಣಕಲ್, ಮಲ್ಲಾಪುರಗಳಲ್ಲಿ ಕಂಡುಬಂದಿರುವ ಚಿತ್ರಗಳಿಗೆ ಹೋಲಿಕೆಯಾಗುತ್ತವೆ. ಸುಮಾರು ಹದಿನೈದಕ್ಕೂ ಹೆಚ್ಚಿನ ಚಿತ್ರಗಳು ವಿವಿಧ ಕಾಲಘಟ್ಟಗಳಲ್ಲಿ ರಚಿಸಲ್ಪಟ್ಟಿವೆ. ಚಿತ್ರಗಳ ಶೈಲಿ ,ವರ್ಣ ಹಾಗೂ ಗವಿಯಲ್ಲಿ ದೊರೆಯುತ್ತಿರುವ ಮಡಕೆಚೂರು, ಚರ್ಟ್ ಶಿಲೆಯ ಚೂರುಗಳ ಆಧಾರದ ಮೇಲೆ ಇಲ್ಲಿಯ ಚಿತ್ರಗಳು ಶಿಲಾತಾಮ್ರಯುಗದ ಕೊನೆಯ ಹಂತ( ಪ್ರ.ಶ.ಪೂ.1400-800),ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿಯ ಆದಿಮಧ್ಯಭಾಗದ( ಪ್ರ.ಶ.ಪೂ.1000-500) ಕಾಲದವೆಂದು ನಿರ್ಣಯಿಸಬಹುದು.ಈ ಚಿತ್ರಗಳಿಂದ ಕೊಪ್ಪಳ ಪ್ರದೇಶದ ಆದಿಮಾನವನ ಜೀವನ ಸಂಸ್ಕೃತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಆಸ್ಪದವಾತಾಗಿದೆ ಎಂದು ಡಾ.ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ .ಈ ಚಿತ್ರಗಳ ಶೋಧನೆಯಲ್ಲಿ ವಿದ್ಯಾರ್ಥಿ ಶರಣಪ್ಪ ಲಮಾಣಿ ಹಾಗೂ ಬಂಡಿಹರ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಎಡ್ವರ್ಡ್ ಅನಿಲ್ ಡಾ.ನಿಂಗಪ್ಪ ಕಂಬಳಿ, ಕೃಷ್ಣಮೂರ್ತಿ ಬೇಲೂರು ಗಡ್ಡೆಪ್ಪ ನೆರವಾಗಿದ್ದಾರೆ ಎಂದು ಕೋಲ್ಕಾರ ತಿಳಿಸಿದ್ದಾರೆ.
,...................................................
Comments
Post a Comment